ಪೆಕ್, ಗ್ರೆಗರಿ
1916- ಹಾಲಿವುಡ್ ನಟ. ಅತಿ ದೀರ್ಘಕಾಲ ನಾಯಕನಾಗಿ ಉಳಿದುಬಂದ ಅಮೆರಿಕನ್ ನಟರಲ್ಲಿ ಪ್ರಮುಖ. ಮೂವತ್ತೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯನಾಗಿದ್ದಾನೆ. ಕ್ಯಾಲಿಫೋರ್ನಿಯದ ಲಾ ಯೊಲ್ಲ ಎಂಬಲ್ಲಿ ಜನಿಸಿದ ಈತ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದ. ಓದು ಹಾಗೂ ಅಭಿನಯದಲ್ಲಿ ಆಸಕ್ತಿ ಇತ್ತಾಗಿ ವಿದ್ಯಾರ್ಥಿ ಜೀವನದಲ್ಲಿಯೇ ಮಾಬಿಡಿಕ್ ನಾಟಕದಲ್ಲಿ ಪಾತ್ರ ವಹಿಸಿದ. ಹವ್ಯಾಸಿ ನಟನಾಗಿ ವ್ಯಾಪಕ ಪ್ರವಾಸ ಮಾಡಿದ. ನಾಟಕ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಬ್ರಾಡ್ವೆಯಲ್ಲಿ ಈತ ಪಾತ್ರ ವಹಿಸಿದ ಪ್ರಸಿದ್ಧ ನಾಟಕಗಳೆಂದರೆ ಮಾರ್ನಿಂಗ್ ಸ್ಟಾರ್, ದಿ ವಿಲೊ ಆಂಡ್ ಐ, ಸೆನ್ಸ್ ಅಂಡ್ ಸೋಲ್ಜರ್ಸ್ ಇತ್ಯಾದಿ. ಕ್ಯಾಸಿ ರಾಬಿನ್ಸ್ ಎಂಬ ಚಿತ್ರ ನಿರ್ಮಾಪಕ ಹಾಗೂ ಚಿತ್ರ ಕಥೆಗಾರ 1943ರಲ್ಲಿ ಇವನ ಪ್ರತಿಭೆಯನ್ನು ಗುರುತಿಸಿ ಚಲನಚಿತ್ರರಂಗಕ್ಕೆ ಪ್ರವೇಶಗೊಳಿಸಿದ. ಈತನ ಮೊದಲ ಚಿತ್ರ ಡೇಸ್ ಆಫ್ ಗ್ಲೋರಿ (1944). ಅನಂತರ ಟ್ವೆಂಟಿಯತ್ ಸೆಂಚುರಿ ಫಾಕ್ಸ್, ಮೆಟ್ರೊಗೋಲ್ಡ್‍ವಿನ್ ಮೇಯರ್ ಹಾಗೂ ರೇಡಿಯೊ-ಕೀತ್-ಆರ್ಫಿಯಮ್ ಸಂಸ್ಥೆಗಳ ಚಿತ್ರಗಳಲ್ಲಿ ಕರಾರು ಒಪ್ಪಂದದ ಮೇಲೆ ನಟಿಸಿದ. ಚಿತ್ರರಂಗಕ್ಕೆ ಸೇರಿದ ಮೇಲೂ ನಾಟಕರಂಗದೊಡನೆ ಸಂಪರ್ಕವಿಟ್ಟುಕೊಂಡಿದ್ದು 1946ರಲ್ಲಿ ದಿ ಪ್ಲೇಬಾಯ್ ಆಫ್ ದಿ ವೆಸ್ಟರ್ನ್ ವಲ್ರ್ಡ್ ನಾಟಕದಲ್ಲಿ ಅಭಿನಯಿಸಿದ. ದಿ ಕೀಸ್ ಆಫ್ ಕಿಂಗ್ಡಂ (1944), ಸ್ಟೈಲ್ ಬೌಂಡ್ (1946), ಜಂಟ್ಲ್‍ಮನ್ಸ್ ಅಗ್ರಿಮೆಂಟ್ (1948), ಯಲ್ಲೊ ಸ್ಕೈ (1949), ದಿ ಗನ್ ಫೈಟರ್ (1950), ಕ್ಯಾಪ್ಟನ್ ಹೊರೇಷಿಯೊ ಹಾರ್ನ್‍ಬ್ಲೋಯರ್ (1951), ಇವನ ಆರಂಭದ ಚಿತ್ರಗಳು. ಆಡ್ರಿ ಹೆಫ್‍ಬನ್ ಎಂಬ ನಟಿಯೊಡನೆ ಅಭಿನಯಿಸಿದ ಇವನ ರೋಮನ್ ಹಾಲಿಡೆ (1953) ಎಂಬ ಹಾಸ್ಯಚಿತ್ರ ಅಪಾರ ಜನಪ್ರಿಯತೆ ಹಾಗೂ ಮೆಚ್ಚುಗೆ ಗಳಿಸಿತು. ಸಾಮಾನ್ಯವಾಗಿ ಮೃದು ಪಾತ್ರಗಳನ್ನು ಅಭಿನಯಿಸುವ ಈತ ಸ್ಕಾಟ್‍ಫಿಟ್ಸ್ ಜರಲ್ಡ್‍ನಿಗಾಗಿ ಬೆಲವಡ್ ಇನ್ ಫಿಡೆಲ್ (1959) ಹಾಗೂ ದಿ ಸ್ನೋಸ್ ಆಫ್ ಕಿಲಿಮಂಜಾರೊಗಳಂಥ (1952) ಚಿತ್ರದಲ್ಲಿ ರೋಷಯುಕ್ತ ಒರಟು ಪಾತ್ರಗಳಲ್ಲಿಯೂ ಅಭಿನಯಿಸಿದ್ದಾನೆ. ಇವನ ಅತ್ಯಂತ ಯಶಸ್ವಿ ಚಿತ್ರಗಳೆಂದರೆ ದಿ ಗನ್ಸ್ ಆಫ್ ನವರೋನ್ (1961), ಹೌ ದಿ ವೇಸ್ಟ್ ವಾಸ್ ವನ್ (1962), ಅರಬೆಸ್ಕ್ (1966), ಮೆಕೆನಾಸ್ ಗೋಲ್ಡ್ ಮತ್ತು ದಿ ಸ್ಟಾಕಿಂಗ್ ಮೂನ್ (1969), 1976ರಲ್ಲಿ ಬಿಡುಗಡೆಯಾದ ಓಮನ್ ಚಿತ್ರ ಹಣ ಗಳಿಕೆಯಲ್ಲಿ ಜಾಗತಿಕ ದಾಖಲೆ ಸ್ಥಾಪಿಸಿದೆ. ವಿಲಕ್ಷಣ ಮಾಂತ್ರಿಕ ಘಟನಾವಳಿಯ ಈ ಚಿತ್ರದಲ್ಲಿ ನೈಸರ್ಗಿಕಾತೀತ ಶಕ್ತಿಯ ಸುಳಿಗೆ ಸಿಲುಕಿಕೊಳ್ಳುವ ಅಮೆರಿಕನ್ ರಾಯಭಾರಿಯ ಪಾತ್ರ ಇವನದು.	40ರ ದಶಕದಲ್ಲಿ ಸತತವಾಗಿ ಮೂರುವರ್ಷಗಳ ಕಾಲ ಇವನ ಹೆಸರನ್ನು ಆಸ್ಕರ್ ಪ್ರಶಸ್ತಿಗೆ ಸೂಚಿಸಲಾಗಿತ್ತು. ಐದು ಬಾರಿ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದ್ದನು. 1962ರಲ್ಲಿ ಶ್ರೇಷ್ಠ ನಟನೆಂದು ಇವನಿಗೆ ಆಸ್ಕರ್ ಪ್ರಶಸ್ತಿ ಬಂದದ್ದು ಟು ಕಿಲ್ ಎ ಮಾಕಿಂಗ್ ಬರ್ಡ್ (1962) ಚಿತ್ರದಲ್ಲಿನ ಅಭಿನಯಕ್ಕಾಗಿ.

	ಚಿತ್ರ ನಿರ್ಮಾಪಕನೂ ಆಗಿರುವ ಪೆಕ್ 1947ರಲ್ಲಿಯೇ ನಾಲ್ವರು ಸ್ನೇಹಿತರೊಡಗೂಡಿ ಒಂದು ಸ್ಟಾಕ್ ಕಂಪನಿಯನ್ನು ಆರಂಭಿಸಿದ. 1959ರಲ್ಲಿ ಸ್ವಂತ ಚಿತ್ರನಿರ್ಮಾಣ ಸಂಸ್ಥೆಯೊಂದನ್ನು ಸ್ಥಾಪಿಸಿ ಫೋರ್ಕ್ ಚೋಪ್ ಹಿಲ್ ಚಿತ್ರವನ್ನು ನಿರ್ಮಿಸಿದ. ವಿಯಟ್ನಾಮ್ ಯುದ್ಧಕ್ಕೆ ವಿರುದ್ಧ ಧೋರಣೆ ತಾಳಿದ ಈತ 1973ರಲ್ಲಿ ನಿರ್ಮಿಸಿದ ದಿ ಟ್ರಯಲ್ ಆಫ್ ದಿ ಕಾಟ್ಸೊನವಿಲ್ಲೆ ನೈನ್ ಆರ್ಥಿಕವಾಗಿ ನಷ್ಟ ಉಂಟು ಮಾಡಿತು. ಈ ಚಿತ್ರದಲ್ಲಿ ಈತ ಅಭಿನಯಿಸಿರಲಿಲ್ಲ. ಈತನ ಇತರೆ ಚಿತ್ರಗಳೆಂದರೆ ದಿ ಬಾಯ್ಸ್ ಫ್ರೆಮ್ ಬ್ರೆಜಿಲ್ (1978), ದಿ ಓಲ್ಡ್ ಗ್ರಿಂಗೊ (1989), ಕೆಪ್‍ಫಿಯರ್ (1991) ಮುಂತಾದವು. ಅನಂತರ ಭವ್ಯ ಹೊರಾಂಗಣದಲ್ಲಿ, ಸಾಹಸ ರಂಜಕತೆಯ ಅದ್ಧೂರಿ ಚಿತ್ರವಾಗಿ ಈತ ನಿರ್ಮಿಸಿದ ದಿ ಡೊರ್ ಕೂಡ ಯಶಸ್ಸು ಗಳಿಸಲಿಲ್ಲ. ಫ್ರೆಂಚ್ ಹುಟ್ಟಿನ ವೆರೊನಿಕ ಈತನ ಪತ್ನಿ. ಟೆಲಿವಿಷನ್ ವರದಿಗಾರನೂ ಛಾಯಾಗ್ರಾಹಕನೂ ಆಗಿದ್ದ ಈತನ ಮಗ ಮೂವತ್ತು ವರ್ಷದ ಜೋನಾತನ್ 1975ರಲ್ಲಿ ಆತ್ಮಹತ್ಯೆ ಮಾಡಿಕೊಂಡ.
(ಎಸ್.ಎಸ್.ಎಂ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ